ತುಮಕೂರು–ದಾವಣಗೆರೆ ನಡುವೆ ರೈಲು ಮಾರ್ಗ ನಿರ್ಮಾಣ ಮಾಡಲು ಅಂತಿಮ ಯೋಜನೆ ಸಿದ್ಧಗೊಂಡಿದ್ದು, ಜಿಲ್ಲೆಯಲ್ಲಿ ಭೂಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಜಿಲ್ಲೆಯ 14 ಗ್ರಾಮಗಳಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ದಾವಣಗೆರೆ ತಾಲ್ಲೂಕಿನ ಆನಗೋಡು ಹೋಬಳಿಯ ಬುಳ್ಳಾಪುರ, ಆನಗೋಡು, ನೀರ್ಥಡಿ, ಹೆಬ್ಬಾಳು, ಹುಣಸೇಕಟ್ಟೆ, ರಂಗವ್ವನಹಳ್ಳಿ, ಪಂಚೇನಹಳ್ಳಿ, ಚಿಕ್ಕನಹಳ್ಳಿ, ತೋಳಹುಣಸೆ, ಕರೇ ಲಕ್ಕೇನಹಳ್ಳಿ, ಚಟ್ಟೋಬನಹಳ್ಳಿ, ಕೊಗ್ಗನೂರು, ಹಾಲುವರ್ತಿ ಗ್ರಾಮಗಳಲ್ಲಿ ರೈಲು ಮಾರ್ಗ ಹಾದು ಹೋಗಲಿದೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 237 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.
ತುಮಕೂರು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಚಿತ್ರದುರ್ಗದಲ್ಲಿ ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ. ದಾವಣಗೆರೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದಕ್ಕಾಗಿ ಸರ್ಕಾರ ಈಗಾಗಲೇ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಜುಲೈ...
more... 17ರಂದು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆ. 2ರಂದು ಸರ್ಕಾರದ ಗೆಜೆಟ್ನಲ್ಲೂ ಪ್ರಕಟಗೊಂಡಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ 60 ದಿನಗಳೊಳಗೆ ಸಲ್ಲಿಸುವಂತೆ ರೈತರಿಗೆ ಸೂಚಿಸಲಾಗಿದೆ.
ರೈಲ್ವೆ ಮತ್ತು ಕಂದಾಯ ಇಲಾಖೆಗಳ ಮೂಲಕ ಮತ್ತೊಮ್ಮೆ ಸರ್ವೆ ನಡೆಸಲಾಗುವುದು. ಅಂತಿಮವಾಗಿ ಗುರುತು ಮಾಡಿದ ಭೂಮಿಯನ್ನಷ್ಟೇ ಜಿಲ್ಲಾಡಳಿತ ಸ್ವಾಧೀನಕ್ಕೆ ತೆಗೆದುಕೊಂಡು, ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿದೆ ಎಂದು ತಿಳಿಸುತ್ತಾರೆ ಭೂಸ್ವಾಧೀನ ವಿಭಾಗದ ಅಧಿಕಾರಿಗಳು.
353 ಸಂತ್ರಸ್ತ ಕುಟುಂಬಗಳು: ಭೂಸ್ವಾಧೀನ ಪ್ರಕ್ರಿಯೆಯಿಂದ ಜಿಲ್ಲೆಯಲ್ಲಿ ಒಟ್ಟು 353 ಕುಟುಂಬಗಳು ಸಂತ್ರಸ್ತವಾಗಲಿವೆ. ಇದರಲ್ಲಿ 100 ಪರಿಶಿಷ್ಟ ಜಾತಿ, 63 ಪರಿಶಿಷ್ಟ ಪಂಗಡ, 49 ಹಿಂದುಳಿದ, 14 ಅಲ್ಪ ಸಂಖ್ಯಾತರ ಕುಟುಂಬಗಳಿವೆ. 73 ಕೊಳವೆಬಾವಿಗಳು, 3 ತೆರೆದ ಬಾವಿ, ಒಂದು ಪಂಪ್ಹೌಸ್, 7 ವಿದ್ಯುತ್ ಪರಿವರ್ತಕ, 35 ವಿದ್ಯುತ್ ಕಂಬಗಳು, 10 ತಂತಿ ಬೇಲಿ, 3 ನೀರಿನ ಕಟ್ಟೆ, 42 ಕೊಳವೆ ಮಾರ್ಗಗಳು, 18 ಹನಿ ನೀರಾವರಿ ಘಟಕಗಳು, 8 ಸಮಾಧಿ, ಒಂದು ಶೆಡ್, ಒಂದು ಗಣಿಗಾರಿಕೆ ಸೇರಿ ಒಟ್ಟು 206 ಆಸ್ತಿಗಳು ಬಾಧಿತ ಆಗಲಿವೆ ಎಂದು ಪಟ್ಟಿ ಮಾಡಲಾಗಿದೆ.